ಶನಿ 1

	ಸೌರವ್ಯೂಹದಲ್ಲಿ ಸೂರ್ಯನಿಂದ ದೂರಪ್ರಕಾರ ಆರನೆಯ ಗ್ರಹ (ಗುರು ಮೊದಲನೆಯದು). ಭೂಮಿಯ 752 ಮಡಿ ದೊಡ್ಡದು ಮತ್ತು ಗೋಚರಗ್ರಹಗಳ ಪೈಕಿ ಕೊನೆಯದು (ಸ್ಯಾಟರ್ನ್). ನಮಗೆ ಕಾಣುವಂತೆ ನಕ್ಷತ್ರಪಟದ ಮೇಲೆ ಈ ಗ್ರಹದ ಸರಿತ ಅತಿ ಮಂದವಾಗಿರುವುದರಿಂದ ಇದಕ್ಕೆ ಶನೈಶ್ಚರ (ಶನಿ) ಎಂಬ ಹೆಸರು ಬಂದಿತು. ಇಂಗ್ಲಿಷ್‍ನಲ್ಲಾದರೂ ಸೆಟರ್ನಿಯನ್ ಎಂಬ ಪದದ ಮೂಲ ಅರ್ಥ ನಿಧಾನಿ ಅಥವಾ ತಾಳ್ಮೆ ಇರುವಾತ ಎಂದು. 

	ಭೂಮಿಗಿಂತ ಶನಿ 95 ಪಟ್ಟು ಭಾರ, ಆದರೆ ಸಾಂದ್ರತೆ ಮಾತ್ರ 0.71 ಗ್ರಾಮ್/ಮೀ3, ಅಂದರೆ ನೀರಿನದಕ್ಕಿಂತ ಕಡಿಮೆ. ಸು. 30 ವರ್ಷಗಳಿಗೊಮ್ಮೆ ಸೂರ್ಯ ನನ್ನು ಪರಿಭ್ರಮಿಸುವ ಶನಿಯ ದಿವಸದ ಅವಧಿ ಕೇವಲ 10 ಗಂಟೆಗಳು. ಆದ್ದರಿಂದ ಈ ಗ್ರಹದ ಆಕಾರ ಧ್ರುವಪ್ರದೇಶಗಳಲ್ಲಿ ತಟ್ಟಿದಂ ತಾಗಿದೆ. ಧ್ರುವೀಯ ವ್ಯಾಸ ಸಮಭಾಜಕ ವ್ಯಾಸಕ್ಕಿಂತ ಸೇ. 10ರಷ್ಟು ಕಡಿಮೆ ಇದೆ. 

ಗ್ರಹದ ಮೇಲ್ಮೈಯಲ್ಲಿ ಕಾಣುವ ಪಟ್ಟೆಗಳು ವಿವಿಧಸ್ತರಗಳಲ್ಲಿರುವ ಮೋಡಗಳ ರಚನೆಯನ್ನು ಸೂಚಿಸುತ್ತವೆ. ಅಮೋನಿಯದ ಹರಳುಗಳೇ ಪ್ರಧಾನ. ಗಾಳಿಯ ವೇಗ ಗಂಟೆಗೆ 1,800 ಕಿಮೀ. ಮೇಲ್ಮೈ ಉಷ್ಣತೆಗೆ ಆಂತರಿಕ ಉಷ್ಣತೆಯ ಉತ್ಸರ್ಜನೆ ಮಾತ್ರವಲ್ಲದೆ ಇನ್ನೂ ಬೇರೆ ಮೂಲಗಳಿರಬೇಕೆಂದು ಊಹಿಸಲಾಗಿದೆ. ಚಂಡಮಾರುತಗಳಂಥ ವಿಶೇಷಗಳು ಆಗಾಗ ಕಾಣಿಸಿಕೊಂಡು ಮಾಯವಾಗುತ್ತವೆ. ಶನಿಯ ಕೇಂದ್ರಭಾಗದಲ್ಲಿ ಬಂಡೆಯಂಥ ಘನವಸ್ತು ಇದೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. 

	ಉಂಗುರಗಳು: ಶನಿ ಗ್ರಹದ ಮುಖ್ಯ ಆಕರ್ಷಣೆ ಅದರ ಉಂಗುರಗಳು. ಸಣ್ಣ ದೂರದರ್ಶಕಗಳ ಮೂಲಕ ವೀಕ್ಷಿಸಿದಾಗ ಮೂರು ಸ್ಪಷ್ಟ ವಿಭಾಗಗಳನ್ನೂ ಮಧ್ಯೆ ಖಾಲಿ ಎನ್ನಿಸುವ ಕಟ್ಟುಭಾ ಗವನ್ನೂ ಕಾಣಬಹುದು. ಇವುಗಳಿಗೆ ಏ, ಬೀ, ಸೀ ಎಂದೂ ಕಪ್ಪುಭಾಗಕ್ಕೆ ಕ್ಯಾಸಿನಿವಿಭಾಗ ಎಂದೂ ಹೆಸರು. ಇದನ್ನು ಮೊದಲು (1675) ಗುರುತಿಸಿದಾತ ಜಿಯೋವಿನಿ ಕ್ಯಾಸಿನಿ (1625-1712). 1980-81ರ ಅವಧಿಯಲ್ಲಿ ವಾಯೇಜರ್ II ವ್ಯೋಮನೌಕೆ ಈ ಉಂಗುರದ ಸಮೀಪಚಿತ್ರಗಳನ್ನು ಸೆರೆಹಿಡಿದು ಕಳಿಸಿತು. ಆಗ ಅಲ್ಲಿರುವುದೆಲ್ಲ ಹಿಮಾವೃತ ಬಂಡೆಗಳು ಎಂದು ತಿಳಿದು ಬಂದಿತು.ಇದರಲ್ಲಿ ಕೆಲವು ಹಿಮತುಣುಕುಗಳೂ ಇವೆ. ಅತ್ಯಂತ ದೊಡ್ಡ ತುಣುಕು ಕೆಲವಾರು ಮೀಟರ್‍ಗಳಷ್ಟು ದಪ್ಪವಿರಬಹುದು. ಇವುಗಳ ಶ್ವೇತತೆ (ಆಲ್ಬೆಡೊ) ಅಧಿಕವಾಗಿದೆ. ಆದ್ದರಿಂದ ಉಂಗುರ ಸ್ಪಷ್ಟವಾಗಿ ಕಾಣುತ್ತದೆ. ಉಂಗುರಗಳಲ್ಲಿಯ ಬೇರೆಬೇರೆ ವಿಭಾಗಗಳನ್ನೂ ಈಗ ಗುರುತಿಸಲಾಗಿದೆ. ವಿಸ್ತಾರವಾಗಿ ಹರಡಿರುವ ಉಂಗುರಗಳ ದಪ್ಪ ಕೆಲವೇ ಮೀಟರ್‍ಗಳು. ಇವುಗಳ ಎಲ್ಲ ತುಣುಕುಗಳನ್ನೂ ಒಟ್ಟು ಗೂಡಿಸಿದರೆ ಸು. 100 ಕಿಮೀ ವ್ಯಾಸದ ಬಂಡೆಯಾಗಬಹುದು. 

	ಪಯೊನಿಯರ್ ಮತ್ತು ವಾಯೇಜರ್ ನೌಕೆಗಳು ತೆಳ್ಳನೆಯ ಡೀ, ಎಫ್, ಜಿ ಉಂಗುರಗಳನ್ನು ಗುರುತಿಸಿದುವು. ಎಫ್‍ನಲ್ಲಿ ಗಂಟುಗಳಂಥ ರಚನೆಗಳುಂಟು. ಸೀ  ಮತ್ತು ಬೀಗಳಲ್ಲಿ ಇಂಥ ಸಾವಿರಾರು ಉಂಗುರಗಳಿವೆ. ಆದರೆ ಕ್ಯಾಸಿನಿ ವಿಭಾಗದಲ್ಲಿ ಮಾತ್ರ ಕೇವಲ 100 ಇವೆ. ಗ್ರಹದ ಉಪಗ್ರಹಗಳಿಗೂ ಉಂಗುರಗಳಿಗೂ ನೇರ ಸಂಬಂಧ ಇರಬಹುದೆಂದು ಊಹಿಸಲಾಗಿದೆ. 
ಉಪಗ್ರಹಗಳು: ಅತಿದೊಡ್ಡ ಉಪಗ್ರಹ ಟೈಟನನ್ನು 1656ರಲ್ಲಿ ಕ್ರಿಶ್ಚಿಯನ್ ಹೈಗೆನ್ಸ್ (1629-95) ಪತ್ತೆಮಾಡಿದ. ಅವುಗಳ ಸಂಖ್ಯೆ ಬೆಳೆಯುತ್ತ ಹೋಗಿ ಇಂದು (2004) ಅದು 32ನ್ನು ಮುಟ್ಟಿದೆ. ದೊಡ್ಡ ದೊಡ್ಡ ಉಪಗ್ರಹಗಳಿಗೆ ಬೇರೆಬೇರೆ ಹೆಸರುಗಳಿವೆ. 

	ಟೈಟನ್: ಇದು ಚಂದ್ರನಿಗಿಂತ ದೊಡ್ಡದು. ಇದನ್ನು ತೆಳುವಾತಾವರಣ ಆವರಿಸಿದೆ. ಇಲ್ಲಿ ಮೀಥೇನ್ ಮತ್ತು ನೈಟ್ರೊಜನ್ ಅಂಶ ಹೆಚ್ಚು. ಹೀಗಾಗಿ ಸೌರಪ್ರಕಾಶ ಶನಿಯ ನೆಲಕ್ಕೆ ತಲಪುವುದಿಲ್ಲ. ಆದ್ದರಿಂದ ಇಲ್ಲಿ ನೀರಿನ ಬದಲು ಈಥೇನ್‍ನ ಮೋಡ, ಮಳೆ, ಸಾಗರಗಳಿರ ಬಹುದೆಂಬುದು ಊಹೆ. 2004ರ ಡಿಸೆಂಬರ್‍ನಲ್ಲಿ ಹೈಗೆನ್ಸ್ ಹೆಸರಿನ ಉಪಕರಣವನ್ನು ಕ್ಯಾಸಿನಿ ಹೆಸರಿನ ನೌಕೆ ಇಳಿಬಿಟ್ಟಿದೆ. ಇದರಿಂದ ಮಿಥೇನ್‍ನ ಕವಚದೊಳಗಿರುವ ನೆಲದ ಭಾಗದ ವಿವರಗಳು ದೊರಕಲಿವೆ. 

ಇತರ ದೊಡ್ಡ ಉಪಗ್ರಹಗಳೆಂದರೆ ಫೀಬಿ, ಅಯಾಪೆಟಸ್, ಹೈಪರಿಯನ್ ರಿಯಾ, ಡಯೋನೆ, ಟೆಥಿಸ್, ವಿನ್ಸಲಾಡಸ್ ಮತ್ತು ಮಿಮಾಗ್. ಇವುಗಳ ಪೈಕಿ ವಿನ್ಸಲಾಡಸ್ ಎಂಬುದು ಈ ಉಂಗುರಕ್ಕೆ ಸಮೀಪವಾಗಿದೆ. ಇದೇ ಉಪಗ್ರಹದಿಂದ ಚಿಮ್ಮಿದ ತುಣುಕುಗಳು ಉಂಗುರವಾಗಿವೆ ಎಂಬುದೊಂದು ವಾದವಿದೆ. ಅಯಾಪೆಟಸ್‍ನ ಒಂದೊಂದು ಭಾಗದ ಶ್ವೇತತೆಯೂ ಬೇರೆಬೇರೆ. ಫೀಬಿ ಉಳಿದ ಉಪಗ್ರಹಗಳ ವಿರುದ್ಧ ದಿಕ್ಕಿನಲ್ಲಿ ಶನಿಯನ್ನು ಪರಿಭ್ರಮಿಸುತ್ತದೆ. ಇದೊಂದು ಸೆರೆಸಿಕ್ಕ ಕ್ಷುದ್ರಗ್ರಹ ಎಂಬ ವಾದವಿದೆ.

	ಉಂಗುರದ ಆಚೀಚೆ ಇರುವ ಎರಡು ಉಪಗ್ರಹಗಳಿಗೆ ಷೆಪರ್ಡ್ ಎಂದು ಹೆಸರು. ಅವು ಕುರಿಗಾಹಿಗಳಂತೆ ವರ್ತಿಸುತ್ತವೆ. ಉಂಗುರದ ತುಣುಕುಗಳು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳುತ್ತವೆ. (ಗುರುತ್ವ ನಿಯಂತ್ರಣ ಹಾಗಿದೆ ಎಂದರ್ಥ-ಭೂಮಿಯು ಚಂದ್ರನನ್ನು ಹಿಡಿದು ಇಟ್ಟಿರುವಂತೆ). ಜಾನುಸ್ ಮತ್ತು ಎಪಿಮೆಥುಸ್ ಎಂಬೆರಡು ತೀರ ಸಮೀಪ ಕಕ್ಷೆಗಳಲ್ಲಿವೆ. ಆದರೆ ಅವು ಢಿಕ್ಕಿ ಹೊಡೆಯದೇ ಕಕ್ಷಾಪಲ್ಲಟ ಮಾಡಿಕೊಂಡು ಸಮತೋಲನ ಕಾಪಾಡಿಕೊಂಡಿವೆ. 

2004ರಲ್ಲಿ ಶನಿಯನ್ನು ಸಮೀಪಿಸಿರುವ ಕ್ಯಾಸಿನಿ ಎಂಬ ನೌಕೆ ಮೊದಲ ಕೃತಕ ಉಪಗ್ರಹ.

ಅಂಕಿಅಂಶಗಳು

ರಾಶಿ			...	...	5.69x1026 ಕಿಗ್ರಾಮ್
ಸಮಭಾಜಕವೃತ್ತೀಯ ವ್ಯಾಸ	...	...	60,000 ಕಿಮೀ
ಸಾಚಿದ್ರತೆ			...	...	0.7 ಗ್ರಾಮ್/ಸೆಂಮೀ3
ಆವರ್ತನಾವಧಿ		...	...	10 ಗಂಟೆ 30 ಮಿನಿಟುಗಳು
ಪರಿಭ್ರಮಣಾವಧಿ		...	...	29.42 ವರ್ಷಗಳು
ಕಕ್ಷಾತಲದ ಬಾಗು		...	...	2.490
ಸಮಭಾಜಕ ಬಾಗು	...	...	26.730
ಮೇಲ್ಮೈ ಉಷ್ಣತೆ (ಕೆಲ್ವಿನ್)	...	...	100
ಪ್ರತಿಫಲನಾಂಕ		...	...	0.47
ಕಕ್ಷೆಯ ಉತ್ಕೇಂದ್ರತೆ	...	...	0.053				
		(ಎಸ್.ಎಚ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ